ತಿಂಡಿ ಕಳ್ಳ

“ಆಕಾಶ್! ತಿಂಡಿಗೆ ಏನ್ ಬೇಕು?” ಅಂತ ಅಪ್ಪಾ ಕಿರುಚಿದರು.

“ಏನಾದರೂ ರುಚಿಯಾಗಿರೋದನ್ನ ಮಾಡಿಕೊಡಿ ಅಪ್ಪಾ!” ಎಂದು ಕಿರುಚಿದ ಆಕಾಶ.

ಅಮ್ಮ ಊರಲ್ಲಿರಲಿಲ್ಲ. ಅಜ್ಜಿ ಮನೆಗೆ ಹೋಗಿದ್ದರು. ಆಕಾಶನಿಗೆ ಅಮ್ಮಾ ಮಾಡಿದ ಅಡುಗೆ ಅಂದರೆ ತುಂಬಾ-ತುಂಬಾ ಇಷ್ಟ. ಅವನ ಶಾಲೆಯಲ್ಲೂ ಅವನ ತಿಂಡಿಯನ್ನು ತಿನ್ನಲು ಎಲ್ಲಾ ಗೆಳೆಯರು ಕಾಯುತ್ತಿದ್ದರು. ಆದರೆ ಅಮ್ಮಾ ’ಅಜ್ಜಿಗೆ ಹುಷಾರಿಲ್ಲ. ಅವರು ಹುಷಾರಾಗುವ ತನಕ ಬರುವುದಿಲ್ಲ’ ಎಂದಿದ್ದರು. ಅಮ್ಮಾ ವಾಪಸ್ ಬರೋತನಕ ಅಡುಗೆಯನ್ನು ಅಪ್ಪಾ ತಯಾರಿಸುತ್ತಿದ್ದರು.

****

ಕ್ಲಾಸಿನಲ್ಲಿ ದಿನಾಗಲು ಊಟದ ಡಬ್ಬಿಯ ಕಳ್ಳತನ ವಾಗುತ್ತಿತ್ತು. ಕಳ್ಳ ಊಟ ತಿಂದು, ಡಬ್ಬಿಯಲ್ಲಿ ಒಂದು ಚಾಕ್ಲೇಟ್ ಇಡುತ್ತಿದ್ದ. ಇದು ಒಂದು ವಾರದಿಂದ ನಡೆಯುತ್ತಿತ್ತು. ’ಕ್ಲಾಸ್  ಮಿನಿಸ್ಟರ್’ ಆಗಿದ್ದ ಆಕಾಶ್ ಈ ವಿಷಯದ ಬೇರೆ ವಿಭಾಗಗಳ  ಲೀಡರ್‌ಗಳೊಡನೆ ಚರ್ಚೆಮಾಡಿದ.

“ನೆನ್ನೆ ನಮ್ಮಮ್ಮಾ ಕಳಿಸಿದ ಆಲೂಗಡ್ಡೆ ಪರಾಥ ಮಾಯವಾಯ್ತು. ಆದರೆ ಆ ಕಳ್ಳ ನನ್ನ ಡಬ್ಬಿಯಲ್ಲಿ ಒಂದು ಚಾಕ್ಲೇಟ್ ಮತ್ತೆ ನಗು ಮುಖದ ಗೊಂಬೆಯನ್ನಿಟ್ಟಿದ್ದ.” ಎಂದಳು ಕ್ಲಾಸ್ ಲೀಡರ್ ಇಳಾ.
“ನನ್ನದೂ ಅದೇ ಕಥೆ. ಮನೇಲಿ ತಿಂದ ಇಡ್ಲಿ ಕ್ಲಾಸಿನಲ್ಲಿ ಪೆನ್ನಾಗಿತ್ತು.” ಎಂದ ಫುಡ್ ಮಿನಿಸ್ಟರ್ ಸ್ಕಂದ.
“ಏನೇಯಿರಲಿ. ಈ ಊಟ ಕದಿತಿರೋದು ಯಾಕೆ? ಊಟ ತಿಂದ ಮೇಲೆ ನಮಗೆ ಚಾಕ್ಲೇಟ್, ಪೆನ್ನು, ಗೊಂಬೆನ ಯಾಕೆ ಇಟ್ಟದ್ದು?” ಎಂದು ಪ್ರಶ್ನೆಗಳನ್ನು ಆಕಾಶ್ ಸುರಿಸಿದ.
“ಈ ಕಳ್ಳನ ಅಪ್ಪಾ-ಅಮ್ಮಾ ತುಂಬಾ ಶ್ರೀಮಂತರು ಅನಿಸತ್ತೆ. ಅದಕ್ಕೆ ಅವನು ನಮಗೆ ಚಾಕ್ಲೇಟ್ ಕೊಡೊದು.” ಎಂದಳು ನಿಧಿ.
“ಹೌದು, ಶ್ರೀಮಂತರ ಮನೇಲಿ ಸರಿಯಾಗಿ ಅಡುಗೆ ಮಾಡೋರನ್ನ ಯಾಕಿಟ್‌ ಇರಲ್ಲ?” ಎಂದು ಕೇಳಿದ ಆಕಾಶ್.
“ನೀವೇನಾದರೂ ಚರ್ಚೆ ಮಾಡಿ. ನನಗೆ ನಮ್ಮಮ್ಮಾ ಕಳಿಸೋ ಊಟಾನೇ ಬೇಕು. ಈ ಕಳ್ಳನ್ನ ಬೇಗ ಹಿಡಿದ್ರೆ ಒಳ್ಳೇದು” ಎಂದ ತಿಂಡಿಪ್ರಿಯ ಮೋನಿಷ್.
“ಆಯ್ತು. ನಾನು ಒಂದು ಐಡಿಯಾ ಮಾಡಿದ್ದೇನೆ” ಎಂದಳು ಇಳಾ.
“ಏನು!?” ಎಂದು ಎಲ್ಲಾರು ಒಟ್ಟಿಗೆ ಕೇಳಿದರು.
“ನಮ್ಮಲ್ಲಿ ಯಾರಾದರೂ ಒಬ್ಬರು ದಿನಾಗಲು ಕ್ಲಾಸಿನಲ್ಲೇ ಇರಬೇಕು. ಆಗ ಯಾರಿಗೂ ಊಟ ಕದಿಯಲು ಸಾಧ್ಯವಿಲ್ಲ!” ಎಂದಳು.
“ನಿನ್ನ ಸಲಹೆ ಎಷ್ಟರ ಮಟ್ಟಿಗೆ ಕೆಲಸ ಮಾಡತ್ತೆ ಅಂತ ನೋಡಣ. ನಾಳೆ ನೀನೇ ಕ್ಲಾಸಲ್ಲಿರು”ಎಂದ ಸ್ಕಂದ.
“ಆಯ್ತು ನಾನು ತಯಾರಾಗಿದ್ದೇನೆ” ಎಂದಳು ಇಳಾ.

****

ಮರುದಿನ ಕ್ಲಾಸಿನ ಮಕ್ಕಳು ಆಟದ ಮೈದಾನಕ್ಕೆ ಹೋಗಿದ್ದರು. ಇಳಾ ಕ್ಲಾಸಿನಲ್ಲೆ ಇದ್ದಳು. ಅವಳು ಎಲ್ಲಾ ಊಟದ ಡಬ್ಬಿಗಳನ್ನು ಕೊನೆಯ ಬೆಂಚಿನಲಿಟ್ಟಳು. ಇಳಾ ಕ್ಲಾಸಿನಲ್ಲಿರುವುದನ್ನು ನೋಡಿದ ಮೇಷ್ಟ್ರು, ಅವಳಿಗೆ ಮೂರನೇ ಮಹಡಿಗೆ ಹೋಗಿ ಐದನೆ ತರಗತಿಯ ಮಕ್ಕಳನ್ನು ಕರೆದೊಯ್ಯಲು ಹೇಳಿ ಅವರ ಕೊಠಡಿಗೆ ಹೋದರು.  ಇಳಾ ಆ ಕೆಲಸವನ್ನು ಮಾಡಿ, ತಕ್ಷಣ ತನ್ನ ಕ್ಲಾಸಿಗೆ ಹೋಗಿದಳು. ಎಲ್ಲಾ ಡಬ್ಬಿಗಳು ಅವಳು ಇಟ್ಟ ಹಾಗೆಯೇ ಇತ್ತು.
ಊಟದ ಸಮಯದಲ್ಲಿ ಇಳಾ ತಂಬಾ ಖುಷಿಯಾಗಿ ತನ್ನ ಸ್ನೇಹಿತರಿಗೆ ಅವರವರ ಡಬ್ಬಿಗಳನ್ನು ಹಂಚಿದಳು. ಇಳಾ “ಒಂದು ಡಬ್ಬಿ ಕೂಡ ಮಾಯವಾಗಿಲ್ಲ” ಎಂದು ಹೇಳಿದ ತಕ್ಷಣ ಅಂಜಲಿ ಅಳಲು ಆರಂಭಿಸಿದಳು. ಅಂಜಲಿ ತಂದಿದ್ದ ಚಪಾತಿ ಪಲ್ಯ ಮಾಯವಾಗಿತ್ತು. ಆದರೆ ಅವಳ ಡಬ್ಬಿಯಲ್ಲಿ ಒಂದು ಪೆನ್ಸಿಲ್ ಇತ್ತು.
ಅಂಜಲಿ ಇಳಾಳನ್ನು ತುಂಬಾ ಬೈಯುತ್ತಿದ್ದಳು. “ಊಟ ಕಾಯಲು ಕೂಡ ಆಗದ ಇಳಾ” ಎನ್ನುತ್ತಿದ್ದಳು. ಇಳಾ ಬೇಸರಗೊಂಡು ತನ್ನ ಡಬ್ಬಿಯನ್ನು ತೆಗೆದಾಗ ಅದರಲ್ಲಿ ಒಂದು ಚೀಟಿ ಇತ್ತು. ‘ನನ್ನ ಹಿಡಿಯೋಕಾಗಲ್ಲ ಇಳಾ!!’ ಎಂದು ಬರೆದಿತ್ತು.

ಸಂಜೆ ಎಲ್ಲಾ ಲೀಡರ್‌ಗಳು ಮತ್ತೆ ಭೇಟಿಯಾದರು. “ವಿಷಯ ತುಂಬಾ ಗಂಭೀರವಾಗುತ್ತಿದೆ. ಇದನ್ನು ಬೇಗ ಪರಿಹರಿಸಬೇಕು.” ಎಂದು ಚರ್ಚೆಯನ್ನು  ಆಕಾಶ್ ಆರಂಭಿಸಿದ.
“ಈ ಕಳ್ಳ ತುಂಬಾ ತುಂಬಾ ಬುದ್ಧಿ ಉಪಯೋಗಿಸ್ತಿದ್ದಾನೆ. ಅವನನ್ನ ಬೇಗ ಹಿಡಿಯೋದೆ ಅತ್ಯುತ್ತಮ” ಎಂದು ನಿಧಿ ಹೇಳಿದಳು.
“ನಾನು ಡಬ್ಬಿಗಳ ಕಾವಲಿದ್ದಾಗ ಐದೇ ನಿಮಿಷ ಮೇಷ್ಟ್ರ ಕೇಲಸ ಮಾಡಲು ಮೂರನೇ ಮಹಡಿಗೆ ಹೋಗಿದ್ದೆ. ಅಷ್ಟರಲ್ಲೆ ಊಟ ಕದ್ದಿದ್ದಾನೆ. ಅವನು ನನ್ನ ಕೈಗೆ ಸಿಕ್ಕಿಬಿದ್ದರೆ ಸಖತ್ತಾಗಿರತ್ತೆ” ಎಂದು ಕೋಪದಿಂದ ಇಳಾ ಹೇಳಿದಳು.
“ನಾಳೆಯಿಂದ ಕ್ಲಾಸಿನಲ್ಲಿ ಇಬ್ಬರು ಇರುವುದೇ ಒಳ್ಳೆಯದು. ಒಬ್ಬ ಹೊರಗೆ ಹೋದಾಗ ಇನ್ನೊಬ್ಬ ಕ್ಲಾಸಿನಲ್ಲಿರುತ್ತಾನೆ. ಒಪ್ಪಿಗೇನಾ?” ಎಂದ ಸ್ಕಂದ.
“ಆಗಲಿ” ಎಂದು ಆಕಾಶ್ ಹೇಳಿದ.

****

ನಿರ್ಧರಿಸಿದಂತೆ ಮೋನಿಷ್ ಮತ್ತು ಅಪರ್ಣರನ್ನು ಕ್ಲಾಸಿನಲ್ಲಿ ಕೂರಿಸಲಾಯಿತು. ಇಬ್ಬರು ಡಬ್ಬಿಗಳನ್ನು  ಮತ್ತೆ-ಮತ್ತೆ ಎಣಿಸುತ್ತಿದ್ದರು. ಅಪರ್ಣಳನ್ನು  ಡಾನ್ಸ್ ಮೇಷ್ಟ್ರು ಪ್ರಾಕ್ಟೀಸ್‌ಗೆ ಕರೆದುಕೊಂಡು ಹೋದರು. ಮೋನಿಷ್ ಕ್ಲಾಸಿನಲ್ಲಿ ಒಂಟಿಯಾಗಿದ್ದ. ಅವನಿಗೆ ಭಯವಾಗಿ ನೀರು ಕುಡಿಯಲು ಹೊರಗೆ ಮೊದಲನೇ ಮಹಡಿಗೆ ಹೋದ. ಅವನು ವಾಪಸ್ ಓಡಿ ಬಂದ. ಡಬ್ಬಿಗಳು ಇದ್ದ ಕಡೆಯೇ ಇತ್ತು. ಕ್ಲಾಸಿಗೆ ಹಿಂತಿರುಗಿದ ಅವನ ಗೆಳೆಯರಿಗೆಲ್ಲಾ ಸಂತೋಷದಿಂದ ಅವರವರ ಡಬ್ಬಿಗಳನ್ನು ಹಿಂತಿರುಗಿಸಿದ. “ನಾನು ಗೆದ್ದೆ” ಎಂದು ತನ್ನನ್ನೆ ಹೊಗಳಿಕೊಳ್ಳುತ್ತಿದ್ದ.
ಆದರೆ ಅವನದ್ದೇ ಊಟ ಮಾಯವಾಗಿತ್ತು. ಅವನ ಡಬ್ಬಿಯೊಳಗೆ ಊಟದ ಬದಲು “ನೀನು ಸೋತೆ” ಎಂದು ಬರೆದಿದ್ದ ಚೀಟಿಯಿತ್ತು. ಮತ್ತೆ ಲೀಡರ್‌ಗಳೆಲ್ಲರೂ ಸಂಜೆ ಭೇಟಿಯಾಗೋಣ ಎನ್ನುತ್ತಿದ್ದರು.

****

ಅಪ್ಪಾ ತಯಾರಿಸಿದಡುಗೆ ಬಾಯಲ್ಲಿ ಇಡಲು ಸಾಧ್ಯವಾಗುತ್ತಿರಲಿಲ್ಲ. ರೊಟ್ಟಿಯನ್ನು ಸುಡುತ್ತಿದ್ದರು. ಅನ್ನ ಪಾಯಸದಂತಿತ್ತು. ಆಕಾಶ್ ಬೇರೆ ಮಾರ್ಗಗಳಿಲ್ಲದೆ ಇದನ್ನು ತಿನ್ನುತ್ತಿದ್ದ. ಆದರೆ ಎಷ್ಟು ದಿನ ಅವನು ಇಂಥ ಊಟ ತಿನ್ನೋದು?

ಅದಕ್ಕೆ ಅವನು ಕ್ಲಾಸಿನಲ್ಲಿ ತಿಂಡಿ ಕದಿಯಲು ಆರಂಭಿಸಿದ. ‘ಕ್ಲಾಸ್ ಮಿನಿಸ್ಟರ್’ ಆಗಿದ್ದ ಆಕಾಶ್ ಯಾರಿಗೂ ಅನುಮಾನ ಬರದಂತೆ ನಟಿಸಿ “ಈ ಕಳ್ಳ ತುಂಬಾ ಬುದ್ಧಿವಂತ” ಎಂದು ಹೇಳುತ್ತಿದ್ದ. ಪಾಪ ಆಕಾಶ್, ಅಪ್ಪಾ ಮಾಡಿದ್ದ ತಿಂಡಿಯನ್ನು ತಿನ್ನಲಾರದೆ ಕಳ್ಳನಾಗಿದ್ದ!!!!

ಒಂದು ವಾರದ ನಂತರ ಎಲ್ಲಾ ಪ್ರಯತ್ನಗಳಿಂದಲೂ ತಿಂಡಿ ಕಳ್ಳ ಸಿಗಲೇ ಇಲ್ಲ ಎಂದು ಎಲ್ಲರೂ ಬೇಸರದಲ್ಲಿದ್ದಾಗಲೇ ಶಾಲೆಯಲ್ಲಿ ತಿಂಡಿ ಕದಿಯುವುದು ತಟ್ಟನೆ ನಿಂತುಹೋಯಿತು. ಎಲ್ಲರೂ ಬೆರಗಾದರು. ಕೆಲವರು ಕಳ್ಳನಿಗೆ ಬುದ್ಧಿ ಬಂದಿದೆ ಎಂದರು. ಆಕಾಶ್ ಮಾತ್ರ ಒಳಗೊಳಗೆ ನಗುತ್ತಾ “ಮನೆಗೆ ಅಮ್ಮ ಅಜ್ಜಿ ಇಬ್ಬರೂ ಬಂದರು. ಇನ್ನು ನಾನ್ಯಾಕೆ ಕದಿಯಲಿ?” ಎಂದುಕೊಳ್ಳುತ್ತಿದ್ದ.

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s